ಕೊಪ್ಪಳ: ತಾಲೂಕಿನ ಗೊಂಡಬಾಳನ ವ್ಯಾಪಾರಿ ಪ್ರಭುರಾಜ್ ಜಾಗಿರ್ದಾರ್ ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ.
ಸಮಾಜ ಸೇವಕ ಮಂಜುನಾಥ ಗೊಂಡಬಾಳ ಸಲಹೆ ಮೇರೆಗೆ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ ಮೂಡಿಸುವ ಚಿತ್ರ ಮತ್ತು ಘೋಷಣೆ ಮುದ್ರಿಸಲಾಗಿದೆ.
ಮದುವೆ ಆಮಂತ್ರಣದ ಒಂದು ಬದಿ ವಧು ವರರಾದ ಪ್ರಭುರಾಜ ಮತ್ತು ಪವಿತ್ರಾ ಮತದಾನದ ಗುರುತು ತೋರಿಸುವ ಚಿತ್ರ, ಜೊತೆಗೆ ಕೇಂದ್ರ ಚುನಾವಣಾ ಆಯೋಗದ ರಾಯಭಾರಿ ಸಚಿನ್ ತೆಂಡೂಲ್ಕರ್ ಮತ್ತು ಅವರ ಪತ್ನಿ ಮತದಾನದ ಗುರುತು ತೋರಿಸುವ ಚಿತ್ರ ಹಾಗೂ ಚುನಾವಣೆ ಆಯೋಗದ ಲೋಗೊ ಹಾಗೂ ಘೋಷಣೆಗಳನ್ನು ಮುದ್ರಿಸಿದ್ದಾರೆ. ಈ ಮೂಲಕ ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ನಳಿನ್ ಅತುಲ್, ಜಿ. ಪಂ. ಸಿಇಒ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಚುನಾವಣೆ ವೀಕ್ಷಕ ಚಂದ್ರಶೇಖರ, ತಾ. ಪಂ. ಇಒ ದುಂಡಪ್ಪ ತುರಾದಿ, ಜಿ.ಪಂ. ಸಿಎಒ ಅಮೀನ್ ಅತ್ತಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್ ಮುಂತಾದವರಿಗೆ ಆಮಂತ್ರಣ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.
ಎಪ್ರಿಲ್ 26 ರಂದು ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿ ಗ್ರಾಮದ ಶ್ರೀ ನಂದಿಬಂಡಿ ಬಸವೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮದುವೆ ಜರುಗಲಿದ್ದು ಮದುವೆಯಲ್ಲಿ ಮತದಾನ ಜಾಗೃತಿ ಫಲಕ ಹಾಕಿ ಪ್ರಮಾಣ ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ನೀರು ಮಿತವಾಗಿ ಬಳಸುವ ಹಾಗೂ ಗಿಡ ನೆಡುವ ಕಾರ್ಯ ಜರುಗಲಿದೆ.